ಸ್ನೇಹಿತರೆ ನಮ್ಮ ದೇಶವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದೆ. ನಮ್ಮ ದೇಶದ ಆಡಳಿತ ಯಂತ್ರದ ಮೂಲ ಆಧಾರವೇ ಈ ಸಂವಿಧಾನ. ದೇಶದ ಜನರಿಗೆ ಎಲ್ಲ ರೀತಿಯಿಂದಲೂ ಸ್ವಾತಂತ್ರ್ಯ, ಹಕ್ಕು, ಅಧಿಕಾರ ನೀಡಿರುವ ನಮ್ಮ ಸಂವಿಧಾನವು ದೇಶದ ಹಿತಕ್ಕೆ ಹಾಗೂ ಸಾರ್ವಭೌಮತ್ವಕ್ಕೆ ಕುಂದು ಉಂಟಾಗುವ ಸಂದರ್ಭ ಬಂದಾಗ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಂತ ಒಂದು ಅದ್ಭುತ ಕಾರ್ಯತಂತ್ರವನ್ನು ಅದು ಒದಗಿಸಿದೆ. UPSC, KPSC, FDA, SDA ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ ಈ ತುರ್ತು ಪರಿಸ್ಥಿತಿಗಳ ಬಗ್ಗೆ ಇವತ್ತಿನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಸಂವಿಧಾನದ 18ನೇ ಭಾಗದಲ್ಲಿ ಆರ್ಟಿಕಲ್ 352 ರಿಂದ 360 ಇರುವ ಎಲ್ಲಾ ಆರ್ಟಿಕಲ್ ಗಳು ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ಸೂಚನೆಯನ್ನು ಮತ್ತು ಮಾಹಿತಿಗಳನ್ನು ಒಳಗೊಂಡಿದೆ. ಸಂವಿಧಾನದಲ್ಲಿ ಇವುಗಳನ್ನು ಅಳವಡಿಸಿರುವ ಹಿಂದಿನ ಮರ್ಮ ಏನೆಂದರೆ ದೇಶದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಯನ್ನು ಕಾಪಾಡುವುದಾಗಿದೆ. ಅಂದ ಹಾಗೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್ಲ ರಾಜ್ಯ ಸರ್ಕಾರಗಳ ಅಧಿಕಾರವು ಕೇಂದ್ರ ಸರ್ಕಾರದ ಅಧೀನವಾಗುತ್ತದೆ. ಅಂದ್ರೆ ಇದು ಫೆಡರಲ್ ವ್ಯವಸ್ಥೆಯನ್ನು ಕೇಂದ್ರೀಯ ವ್ಯವಸ್ಥೆಯಾಗಿ ಪರಿವರ್ತಿಸುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬದಲಾಗುವ ಈ ವ್ಯವಸ್ಥೆಯೇ ಭಾರತದ ಸಂವಿಧಾನದ ವಿಶಿಷ್ಟ ಗುಣಲಕ್ಷಣವಾಗಿದೆ. ನಮ್ಮ ಸಂವಿಧಾನವು ಮೂರು ರೀತಿಯ ತುರ್ತು ಪರಿಸ್ಥಿತಿಯನ್ನು ಒಳಗೊಂಡಿದೆ.1) ರಾಷ್ಟೀಯ ತುರ್ತು ಪರಿಸ್ಥಿತಿ, 2)ರಾಜ್ಯಗಳ ತುರ್ತು ಪರಿಸ್ಥಿತಿ (ರಾಷ್ಟ್ರಪತಿ ಆಡಳಿತ ), 3) ಆರ್ಥಿಕ ತುರ್ತು ಪರಿಸ್ಥಿತಿ.ಇಂದಿನ ಈ ಆರ್ಟಿಕಲ್ ನಲ್ಲಿ ನಾವು ರಾಷ್ಟೀಯ ತುರ್ತು ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ..
ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದರೇನು?
ಸಂವಿಧಾನದ ಆರ್ಟಿಕಲ್ 352 ರ ಪ್ರಕಾರ ದೇಶದ ಭದ್ರತಾ ವ್ಯವಸ್ಥೆಗೆ ಹೊರಗಿನಿಂದ ಅಕ್ರಮಣವಾದಾಗ ಉದಾಹರಣೆಗೆ ಯುದ್ಧದಂತಹ ಅಥವಾ ದೇಶದೊಳಗೆ ಸಶಸ್ತ್ರ ದಂಗೆಗಳ ಸಂದರ್ಭದಲ್ಲಿ ರಾಷ್ಟ್ರಪತಿಗಳು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ಅಷ್ಟೇ ಅಲ್ಲದೆ ಯುದ್ಧದಂತಹ ಭೀಕರ ಸಂದರ್ಭಗಳ ಮುನ್ಸೂಚನೆ ಸಿಕ್ಕಿದ ಕೂಡಲೇ ರಾಷ್ಟ್ರಪತಿಗಳು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ಒಂದು ವೇಳೆ ಶತ್ರು ದೇಶಗಳ ಆಕ್ರಮಣದ ಮೇರೆಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದರೆ ಅದನ್ನು ‘ಬಾಹ್ಯ ತುರ್ತು ಪರಿಸ್ಥಿತಿ’ ಎಂದು ಕರೆಯಲಾಗುತ್ತದೆ. ಅದೇ ರೀತಿಯಾಗಿ ಒಂದು ವೇಳೆ ಆಂತರಿಕ ಸ್ವಶಸ್ತ್ರ ದಂಗೆಗಳಿಂದಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರೆ ಅದನ್ನು ‘ಆಂತರಿಕ ತುರ್ತು ಪರಿಸ್ಥಿತಿ’ ಎಂದು ಕರೆಯಲಾಗುತ್ತದೆ. ಬಾಹ್ಯ ತುರ್ತು ಪರಿಸ್ಥಿತಿ ಮತ್ತು ಆಂತರಿಕ ತುರ್ತು ಪರಿಸ್ಥಿತಿ ಎರಡು ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಎರಡು ಪ್ರಮುಖ ಕಾರಣಗಳಾಗಿವೆ. ಹೀಗೆ ರಾಷ್ಟ್ರಪತಿಗಳಿಂದ ಘೋಷಣೆಯಾದ ಈ ತುರ್ತು ಪರಿಸ್ಥಿತಿಯು ಇಡಿ ದೇಶಕ್ಕೆ ಅನ್ವಯ ಆಗುತ್ತದೆ ಸಂವಿಧಾನದ 42ನೇ ತಿದ್ದುಪಡಿಯ ಪ್ರಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ನಿರ್ದಿಷ್ಟ ರಾಜ್ಯಗಳಿಗೆ ಅಥವಾ ಯಾವುದೇ ಪ್ರದೇಶಕ್ಕೆ ಘೋಷಿಸುವ ಅವಕಾಶವನ್ನು ನೀಡಿದೆ.
ಸ್ನೇಹಿತರೆ ಮೂಲ ಸಂವಿಧಾನದಲ್ಲಿ ‘ಆಂತರಿಕ ಕಲಹಗಳು’ ತುರ್ತು ಪರಿಸ್ಥಿತಿಯ ಘೋಷಣೆಗೆ ಮೂರನೇ ಕಾರಣ ಎಂದು ಸೂಚಿಸಲಾಗಿತ್ತು. ಆದರೆ ಈ ಆಂತರಿಕ ಕಲಹಗಳು ಎಂಬ ಶಬ್ದವು ಉಚಿತವಲ್ಲ ಎಂದು 1978 ರಲ್ಲಿ ಸಂವಿಧಾನದ 44ನೇ ತಿದ್ದುಪಡಿಯ ಮೂಲಕ ಈ ಶಬ್ದವನ್ನು ‘ಸಶಸ್ತ್ರ ದಂಗೆ’ ಎಂದು ಬದಲಾಯಿಸಲಾಗುತ್ತದೆ. ಈ ತಿದ್ದುಪಡಿಯ ಮೂಲ ಕಾರಣ ಏನೆಂದರೆ 1975ರಲ್ಲಿ ಅಂದಿನ ಕಾಂಗ್ರೆಸ್ ಸರಕಾರದ ಪ್ರಧಾನಮಂತ್ರಿಯಾದ ಇಂದಿರಾ ಗಾಂಧಿಯವರು ಆಂತರಿಕ ಕಲಹಗಳ ಕಾರಣ ನೀಡಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಮುಂದೆ 1977ರಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಕಾರಣವನ್ನು ಬದಲಿಸಿ ‘ಸಶಸ್ತ್ರ ದಂಗೆ’ ಎಂದು ಮರುನಾಮಕರಣ ಮಾಡಲಾಯಿತು. ಅಂದ್ರೆ ಇನ್ನು ಮುಂದಿನ ಯಾವುದೇ ಸರ್ಕಾರಗಳು ‘ಆಂತರಿಕ ಕಲಹಗಳ’ ನೆಪದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವಂತಿಲ್ಲ. ಸ್ನೇಹಿತರೆ 1977ರ ತನಕ ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳ ಸಲಹೆ ಮೇರೆಗೆ ಅಥವಾ ಸ್ವಂತ ನಿರ್ಧಾರದಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದಾಗಿತ್ತು. ಆದರೆ 1978 ರಲ್ಲಿ ಸಂವಿಧಾನದ 44ನೇ ತಿದ್ದುಪಡಿಯ ಮೂಲಕ ಈ ಅವಕಾಶವನ್ನು ತಿದ್ದುಪಡಿ ಮಾಡಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲು ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಮಂತ್ರಿಗಳ ಮೂಲಕ ಲಿಖಿತ ರೂಪದಲ್ಲಿ ಸಲಹೆ ಪಡೆದ ಮೇಲೆಯೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದಾಗಿದೆ. 1975 ರಲ್ಲಿ ಇಂದಿರಾ ಗಾಂಧಿ ಸರ್ಕಾರದಿಂದ ಆದ ಪ್ರಮಾದವನ್ನು ತಪ್ಪಿಸಲು 1978 ರಲ್ಲಿ ಜನತಾ ಸರ್ಕಾರ ಇಂಥದೊಂದು ಕ್ರಮ ತೆಗೆದುಕೊಂಡಿತು. ಅದೆ ರೀತಿಯಾಗಿ 1975 ರಲ್ಲಿ 38 ನೇ ಸಂವಿಧಾನ ತಿದ್ದುಪಡಿ ತರುವ ಮೂಲಕ ಇಂದಿರಾ ಗಾಂಧಿ ಸರ್ಕಾರವು ಹೀಗೆ ಜಾರಿಗೊಳಿಸಲಾದ ರಾಷ್ಟೀಯ ತುರ್ತು ಸಂದರ್ಭವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತಿಲ್ಲ ಎಂಬ ಕಾನೂನನ್ನು ಜಾರಿಗೊಳಿಸಿತು. ಮುಂದೆ ಇದನ್ನ ಜನತಾ ಸರ್ಕಾರವು 1978 ರಲ್ಲಿ 44 ನೇ ಸಂವಿಧಾನ ತಿದ್ದುಪಡಿಯ ಮೂಲಕ ಸಮಂಜಸ ಕಾರಣವಿಲ್ಲದೆ ತುರ್ತು ಪರಿಸ್ಥಿತಿ ಘೋಷಿಸಿದರೆ ಅದನ್ನು ಪ್ರಶ್ನಿಸಿ ಭಾರತದ ಯಾವುದೇ ಪ್ರಜೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಬಹುದು ಎಂದು ಕಾನೂನನ್ನು ಜಾರಿಗೆ ತಂದಿತು.
ಪಾರ್ಲಿಮೆಂಟ್ ಒಪ್ಪಿಗೆ ಮತ್ತು ಅವಧಿ :
ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿಯ ಘೋಷಣೆಯನ್ನು ಪಾರ್ಲಿಮೆಂಟ್ ಮುಂದಿಟ್ಟಾಗ ಪಾರ್ಲಿಮೆಂಟ್ ಒಂದು ತಿಂಗಳ ಅವಧಿಯಲ್ಲಿ ಎರಡೂ ಸದನಗಳಲ್ಲಿ ಒಪ್ಪಿಗೆ (ಸ್ಪೆಷಲ್ ಮೆಜಾರಿಟಿ ) ವ್ಯಕ್ತವಾದರೆ ರಾಷ್ಟ್ರಪತಿಗಳು ಅಧಿಕೃತವಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ಒಂದು ವೇಳೆ ಎರಡೂ ಸದನಗಳ ಪೈಕಿ ಒಂದು ಸದನದಲ್ಲಿ ನಿರ್ಧಾರಿತವಾದ ಬಹುಮತ ಸಾಧ್ಯವಾಗದಿದ್ದರೆ ಆ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವಂತಿಲ್ಲ. ಮುಂಚೆ ಈ ಅವಧಿಯು 2 ತಿಂಗಳಾಗಿತ್ತು. 44 ನೇ ಸಂವಿಧಾನ ತಿದ್ದುಪಡಿಯ ಮೂಲಕ ಇದನ್ನು 1 ತಿಂಗಳಿಗೆ ನಿರ್ದಿಷ್ಟ ಪಡಿಸಲಾಗಿದೆ. ಒಂದು ವೇಳೆ ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಪತನಗೊಂಡರೆ ರಾಜ್ಯ ಸಭೆಯ ಒಪ್ಪಿಗೆಯ ಮೇರೆಗೆ ಆ ಘೋಷಣೆಯನ್ನು ಹೊಸ ಸರ್ಕಾರ ರಚನೆಯಾಗಿ ಲೋಕಸಭೆಯಲ್ಲಿ ಮೊದಲ ಸಭೆಯಿಂದ 30 ದಿನಗಳವರೆಗೆ ಆ ಘೋಷಣೆ ಚಾಲ್ತಿಯಲ್ಲಿ ಇರುತ್ತದೆ. ಅಷ್ಟರಲ್ಲಿ ನೂತನ ಲೋಕಸಭೆ ಅದಕ್ಕೆ ಒಪ್ಪಿಗೆ ಕೊಡಬೇಕು ಅಥವಾ ತಿರಸ್ಕರಿಸಬೇಕು.
ತುರ್ತು ಪರಿಸ್ಥಿತಿ ಹೇಗೆ ಮರು ಪಡೆಯಲಾಗುತ್ತದೆ?
ರಾಷ್ಟ್ರಪತಿಗಳು ಯಾವ ಸಂದರ್ಭದಲ್ಲಿ ಬೇಕಾದರೂ ತುರ್ತು ಪರಿಸ್ಥಿಯನ್ನು ಹಿಂಪಡೆದುಕೊಳ್ಳಬಹುದಾಗಿದೆ. ಆದರೆ ಅದಕ್ಕೆ ಲೋಕಸಭೆಯ ಸಮ್ಮತಿ ಇರಬೇಕು. ಆದರೆ 1977 ರ ಮುಂಚೆ ರಾಷ್ಟ್ರಪತಿಗಳು ಲೋಕಸಭೆಯ ಸಮ್ಮತಿ ಇಲ್ಲದೆಯೇ ಅದನ್ನು ಹಿಂಪಡೆಯಬಹುದಾಗಿತ್ತು. ಆದರೆ 1978 ರ 44 ನೇ ಸಂವಿಧಾನ ತಿದ್ದುಪಡಿಯ ಮೂಲಕ ಈ ಕಾನೂನನ್ನು ಬದಲಿಸಲಾಯಿತು. ಹೀಗೆ ತುರ್ತು ಪರಿಸ್ಥಿತಿ ಹಿಂಪಡೆದುಕೊಳ್ಳುವುದನ್ನು ಲೋಕಸಭೆ ಮಾತ್ರ ಅಧಿಕಾರ ಹೊಂದಿರುತ್ತದೆ. ಹಿಂಪಡೆದುಕೊಳ್ಳುವ ಸಂದರ್ಭದಲ್ಲಿ ರಾಜ್ಯಸಭೆಯ ಪಾತ್ರವೇನೂ ಇರುವುದಿಲ್ಲ & ಇದನ್ನು ಸರಳ ಬಹುಮತದಿಂದ ಹಿಂಪಡೆಯಲಾಗುತ್ತದೆ.
ತುರ್ತು ಪರಿಸ್ಥಿತಿಯಿಂದ ಆಗುವ ಪರಿಣಾಮಗಳು :-
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡುತ್ತವೆ. ಹೀಗೆ ಅಧೀನಗೊಂಡ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಯಾವುದೇ ಕೆಲಸವನ್ನು ನೀಡಿದರೂ ಅದನ್ನು ರಾಜ್ಯ ಸರ್ಕಾರಗಳು ಚಾಚು ತಪ್ಪದೇ ಮಾಡಬೇಕು. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ರಾಜ್ಯ ಸರ್ಕಾರಗಳನ್ನು ಮುಂದುವರೆಸಲೂಬಹುದು ಅಥವಾ ಸದನವನ್ನು ವಿಲೀನ ಗೊಳಿಸಲೂಬಹುದು. ಈ ಸಂದರ್ಭದಲ್ಲಿ ರಾಜ್ಯದ ಎಲ್ಲ ಕಾರ್ಯ ಕಲಾಪಗಳನ್ನು ಲೋಕಸಭೆಯೇ ನಿರ್ವಹಿಸುತ್ತದೆ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಯಾವುದೇ ಕಾನೂನುಗಳನ್ನು ಜಾರಿಗೆ ತರಬಹುದು. ಹೀಗೆ ಜಾರಿಗೆ ತಂಡ ಈ ಕಾನೂನುಗಳು ತುರ್ತು ಪರಿಸ್ಥಿತಿ ಮುಗಿದ ನಂತರ 6 ತಿಂಗಳುಗಳ ಕಾಲ ಚಾಲ್ತಿಯಲ್ಲಿ ಇರುತ್ತವೆ. ಮುಂದೆ ರಾಜ್ಯ ಸರ್ಕಾರಗಳು ಇವುಗಳನ್ನು ಮುಂದುವರೆಸಬಹುದು ಅಥವಾ ತೆಗೆದು ಹಾಕಬಹುದು. ಹಾಗೆಯೇ ರಾಜ್ಯ ಸರ್ಕಾರಗಳ ಬೊಕ್ಕಸವೆಲ್ಲ ಕೇಂದ್ರ ಸರ್ಕಾರದ ಹಿಡಿತಕ್ಕೆ ಬರುತ್ತದೆ. ಇದಷ್ಟೇ ಅಲ್ಲದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅವಧಿಯು 1 ವರ್ಷಗಳ ವರೆಗೆ ವಿಸ್ತರಿಸುತ್ತದೆ. ಮತ್ತೇ ಲೋಕಸಭೆಯ ಒಪ್ಪಿಗೆ ಪಡೆದ ಮೇಲೆಯೇ ಈ ಅವಧಿಯನ್ನು ಅನಿರ್ದಿಷ್ಟ ಅವಧಿಯವರೆಗೆ ವಿಸ್ತರಿಸಬಹುದು. ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳು ಜಾರಿಯಲ್ಲಿರುವುದಿಲ್ಲ. (ಆರ್ಟಿಕಲ್ 20 ಮತ್ತು 21 ಅನ್ನು ಹೊರತುಪಡಿಸಿ ), ಅಂದರೆ ಈ ಸಂದರ್ಭದಲ್ಲಿ ಸಂವಿಧಾನ ಸೂಚಿಸಿರುವ ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆ ಆದಲ್ಲಿ ಅದನ್ನು ಪ್ರಶ್ನಿಸಿ ಪ್ರಜೆಗಳು ಕೋರ್ಟ್ ಮೆಟ್ಟಿಲು ಏರುವಂತಿಲ್ಲ. ಇಲ್ಲಿಯವರೆಗೆ ಒಟ್ಟು 3 ಬಾರಿ ರಾಷ್ಟೀಯ ತುರ್ತು ಪರಿಸ್ಥಿತಿಗಳನ್ನು ಘೋಹಿಸಲಾಗಿದೆ. ಅದು 1962, 1971 ಮತ್ತು 1975 ರಲ್ಲಿ.
1962 ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ ಈ ಘೋಷಣೆಯನ್ನು ಮಾಡಲಾಗಿತ್ತು. ಇದು 1968 ರ ವರೆಗೆ ಚಾಲ್ತಿಯಲ್ಲಿತ್ತು. ಅದೆ ರೀತಿಯಾಗಿ 1971 ರಲ್ಲಿ ಪಾಕಿಸ್ತಾನವು ಭಾರತದ ಮೇಲೆ ಆಕ್ರಮಣ ಮಾಡಿದಾಗ ತುರ್ತು ಪರಿಸ್ಥಿಯನ್ನು ಘೋಷಿಸಲಾಗಿತ್ತು. ಇದು 1975 ರ ವರೆಗೆ ಚಾಲ್ತಿಯಲ್ಲಿ ಇದ್ದರೂ ಅಂದಿನ ಇಂದಿರಾ ಗಾಂಧಿ ಸರ್ಕಾರವು ‘ಆಂತರಿಕ ಕಲಹದ ‘ ಕಾರಣದ ಮೇಲೆ ತುರ್ತು ಪರಿಸ್ಥಿಯನ್ನು ಘೋಷಿಸಿತ್ತು.
ಒಟ್ಟಾರೆಯಾಗಿ ಹೇಳಬೇಕೆಂದರೆ ಸಂವಿಧಾನವು ದೇಶದ ಹಿತ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಬಂದಾಗ ಸಂದರ್ಭದಲ್ಲಿ ಎಲ್ಲಕ್ಕಿಂತ ದೇಶ ಮೊದಲು ಎಂಬ ತತ್ವದ ಆಧಾರದಲ್ಲಿ ಸಂವಿಧಾನದಲ್ಲಿ ಇದನ್ನು ಅಳವಡಿಸಿದೆ.
ಈ ಆರ್ಟಿಕಲ್ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ…. ಇಂತಹ ಹೆಚ್ಚಿನ ಆರ್ಟಿಕಲ್‌ಗಳಿಗಾಗಿ ನೋಟಿಫಿಕೇಶನ್‌ಗಳನ್ನು ಆನ್ ಮಾಡಿಕೊಳ್ಳಿ..
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…